ರಾಜ್ಯದಲ್ಲಿನ ಅತಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಇ)ಗಳಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)ನ ನೂತನ ಅಧ್ಯಕ್ಷೆ ಉಮಾರೆಡ್ಡಿ ಒತ್ತಾಯಿಸಿದರು.
ಎಫ್‌ಕೆಸಿಸಿಐ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಹಾಗೂ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ೧ ದಶಲಕ್ಷ ಉದ್ಯಮಿಗಳನ್ನ ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಮಹಿಳಾ ಉದ್ಯಮಿಗಳನ್ನ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಉತ್ಪಾದನೆ, ವ್ಯಾಪಾರ ಮತ್ತು ಸೇವೆಗಳ ಕ್ಷೇತ್ರಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಮೂಲಕ ಜಿಡಿಪಿ ವೃದ್ಧಿಗೆ ಸಹಕಾರ ನೀಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಎಫ್‌ಕೆಸಿಸಿಐ ತನ್ನ ಬ್ರಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಲಿದ್ದು, ಅಂತರಾಷ್ಟಿಯ ಮೈತ್ರಿಗಳನ್ನು ನಿರ್ಮಿಸಿ, ಬಿ೨ಬಿ ಕಾರ್ಯಕ್ರಮ ಆಯೋಜಿಸಿ, ರಾಜ್ಯವನ್ನು ಪ್ರಾಮುಖ್ಯ ಹೂಡಿಕೆ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ಪ್ರದರ್ಶಿಸುವ ಮೂಲಕ ಉದ್ಯಮಿಗಳನ್ನು ಜಾಗತಿಕ ನಕ್ಷೆಯಲ್ಲಿ ಸ್ಥಾಪಿಸುವ ಕನಸು ಹೊಂದಿದ್ದೇವೆ ಎಂದರು.
ವಿಕಸಿತ ಭಾರತಕ್ಕೆ ರಾಜ್ಯವು ೧ ಟ್ರಿಲಿಯನ್ ಆರ್ಥಿಕ ಶಕ್ತಿಯತ್ತ ಧಾವಿಸಲು ಎಫ್‌ಕೆಸಿಸಿಐ ಅನ್ನು ಒಂದು ಪ್ರಮುಖ ಪಾಲುದಾರರನ್ನಾಗಿ ಮಾಡಿಕೊಳ್ಳುವ ಜತೆಗೆ ರಾಜ್ಯದಲ್ಲಿನ ಎಂಎಸ್‌ಎಇ ಹಾಗೂ ಸ್ಟಾರ್ಟ್ಅಪ್‌ಗಳಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಕೈಗಾರಿಕೆಗಳನ್ನು ೨ ಮತ್ತು ೩ನೇ ಶ್ರೇಣಿಯ ನಗರಗಳಲ್ಲಿ ವಿಸ್ತರಿಸುವ ಚಿಂತನೆ. ಪ್ರವಾಸೋದ್ಯಮ ಮತ್ತು ಕೃಷಿ ವಲಯದಲ್ಲಿ ಅಭಿವೃದ್ಧಿ ಗುರಿ ಹೊಂದಲಾಗಿದೆ. ರಾಜ್ಯವನ್ನು ಹೂಡಿಕೆದಾರರ ತಾಣವನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಹಾಗಾಗಿ ಉತ್ಪಾದನಾ ಕೈಗಾರಿಕಾ ಅರಂಭಕ್ಕೆ ಸಾಲ ಸೌಲಭ್ಯ ನೀಡುವಂತೆ ಮನವಿ ಮಾಡಿದರು.
ಸಂಸ್ಥೆಯ ಸದಸ್ಯರಿಗೆ ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್, ಡೇಟಾ ಅನಾಲಿಟಿಕ್ಸ್ ಮತ್ತು ಇಂಡಸ್ಟಿç ೪.೦ ಪರಿಹಾರಗಳ ಪ್ರವೇಶ ನೀಡುವ ಮೂಲಕ ಶಕ್ತಿಪಡಿಸಲಿದೆ. ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಡಿಜಿಟಲ್ ಶಕ್ತಿಯುತ ಘಟಕವಾಗಲು ಇದು ನೆರವಾಗಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಫ್ ಕೆ ಸಿ ಸಿ ಐ ಹಿರಿಯ ಉಪಾಧ್ಯಕ್ಷ ಶ್ರೀ ಟಿ ಸಾಯಿ ರಾಂ ಪ್ರಸಾದ್ ರವರು ಭಾಗವಹಿಸಿದ್ದರು.